ಒಲಿದು ಬಾಪ್ಪ ಧರ್ಮಗುರುವೆ
ಸಿದ್ದಯ್ಯ ಸ್ವಾಮಿ ಬನ್ನಿ...
ಸಿದ್ದಯ್ಯ ಸ್ವಾಮಿ ಬನ್ನಿ...
ಮಂಟೇದ ಲಿಂಗಯ್ಯ ದಯಮಾಡೋ...
ನಂಬಿದವರ ಮನೆಯ ಒಳಗೆ
ತುಂಬಿ ತುಳುಕಾಡುಬಾಪ್ಪ ಸಿದ್ದಯ್ಯ ಸ್ವಾಮಿ ಬನ್ನಿ...
ಮಂಟೇದ ಲಿಂಗಯ್ಯ ನೀವೇ ಬನ್ನಿ...
ಹೀಗೆ ತಂಬೂರಿ ಹಿಡಿದು ಹಿಮ್ಮೇಳದೊಂದಿಗೆ ಮಂಟೇಸ್ವಾಮಿ ಮಲೆ ಮಾದೇಶ್ವರ ಮೊದಲಾದ ಮೌಖಿಕ ಕಥನಗಳನ್ನು ಹಾಡುವ ನೀಲಗಾರಮೇಳ ಕನ್ನಡ ನಾಡಿನ ಪ್ರಮುಖ ಜಾನಪದ ಕಲಾ ಪ್ರಕಾರಗಳಲ್ಲಿ ಒಂದು. ನೀಲಗಾರ ಮೇಳದಲ್ಲಿ ಏಕವ್ಯಕ್ತಿಯಿಂದ ಹಿಡಿದು ನಾಲ್ಕೈದು ಕಲಾವಿದರು ತಂಡಗಳಾಗಿ ಕಥನಗಳನ್ನು ಪ್ರಸ್ತುತಪಡಿಸುತ್ತಾರೆ.
ನಾಗರ ಹೆಡೆಯ ಮರದ ತಂತೀವಾದ್ಯವಾದ ತಂಬೂರಿ ನೀಲಗಾರ ಮೇಳದ ಮುಖ್ಯ ಪರಿಕರ. ಪ್ರಧಾನ ಹಾಡುಗಾರನೇ ಬಲಗೈಯಲ್ಲಿ ತಂಬೂರಿಯನ್ನು, ಎಡಗೈಯಲ್ಲಿ ಗಗ್ಗರವನ್ನು ನುಡಿಸುತ್ತಾ ಹಾಡುತ್ತಾನೆ. ಉಳಿದಂತೆ ದಂಬಡಿ, ಡಕ್ಕೆ, ತಾಳಗಳನ್ನು ನುಡಿಸುತ್ತಾ ಮುಖ್ಯ ಗಾಯಕನಿಗೆ ಹಿಮ್ಮೇಳವಾಗಿ ಇಬ್ಬರು ಮೂವರು ಹಾಡುತ್ತಾರೆ. ಇವರನ್ನು ಸೊಲ್ಲು ಹೇಳುವವರು ಎನ್ನುತ್ತಾರೆ.
ಬಿಳಿ ಅಂಗಿ ಪಂಚೆ ಉಟ್ಟು, ಕಪ್ಪುಕೋಟು, ತಲೆಗೆ ಮೈಸೂರು ಅರಸರಂತೆ ಕಟ್ಟಿದ ಪೇಟ, ಹಣೆಗೆ ವಿಭೂತಿ, ಮಟ್ಟಿಕಪ್ಪು ಕೊರಳಲ್ಲಿ ರುದ್ರಾಕ್ಷಿ, ಕಂಕುಳಲ್ಲಿ ಜೋಳಿಗೆ. ಇದು ನೀಲಗಾರರ ಸಾಂಪ್ರಾದಾಯಿಕ ಉಡುಪು. ಇಂದಿನವರು ಸಾಧಾರಣ ಬಿಳಿಬಟ್ಟೆ ತೊಡುವುದನ್ನು ರೂಢಿಸಿಕೊಂಡಿದ್ದಾರೆ.
ಮಂಟೇಸ್ವಾಮಿ ಮಾದೇಶ್ವರರು ಸಂಚರಿಸಿ ನೆಲೆಸಿದ ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ ಪ್ರದೇಶಗಳನ್ನೊಳಗೊಂಡ ಕತ್ತಲರಾಜ್ಯ, ನೀಲಗಾರರ ಕಾರ್ಯಕ್ಷೇತ್ರ. ಚಿಕ್ಕಲ್ಲೂರು, ಕಪ್ಪಡಿ, ಬೊಪ್ಪೇಗೌಡನಪುರ, ಕರುಬನಕಟ್ಟೆ, ಮಾದೇಶ್ವರ ಬೆಟ್ಟ ಮೊದಲಾದ ಕ್ಷೇತ್ರಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ನೀಲಗಾರರ ಮೇಳಗಳು ಕಲೆಯುತ್ತವೆ. ಈ ಜಾತ್ರೆಗಳು ವರ್ಷಕ್ಕೊಮ್ಮೆ ಅವರ ವಿದ್ಯೆ ಪ್ರದರ್ಶನಕ್ಕೆ ಸಿಗುವ ದೊಡ್ಡ ವೇದಿಕೆಗಳು. ಉಳಿದ ದಿನಗಳಲ್ಲಿ ನೀಲಗಾರರು ತಂಡಗಳಾಗಿ ಊರೂರ ಮೇಲೆ ನಗರ ಪಟ್ಟಣಗಳಲ್ಲಿ ಮನೆಮನೆ ಮುಂದೆ ಭಿಕ್ಷೆ ಕೇಳುತ್ತಾ ಹಾಡುತ್ತಾರೆ.
ಮನುಷ್ಯ ಲೋಕದ ಹಾಡು
ಆದಿ ಒಳಗಲ ಜೋತಿ,
ಬೀದಿ ಒಳಗಲ ಜೋತಿ,
ಬಡವರ ಮನೆಗೂ ಜೋತಿ,
ಬಲಗಾರರ ಮನೆಗೂ ಜೋತಿ,
ಸತ್ತಮನೆಗೂ ಜೋತಿ,
ಹೆತ್ತಮನೆಗೂ ಜೋತಿ,
ತಿಪ್ಪೆಮೇಲೆ ಕಸ್ಸಿಟ್ಟರು ಹತ್ಗ ಉರಿಯೊ ಪರಂಜೋತಿ,
ಕುಲೇಳದಿನೆಂಟು ಜಾತಿ ಒಳಗೆ ಏಕದುಡ ಪರಂಜೋತಿ,
ಸಿದ್ದಯ್ಯ ಸ್ವಾಮಿ ಬನ್ನಿ...
ಎಂದು ಮಂಟೇಸ್ವಾಮಿ ಕುರಿತು ನೀಲಗಾರರು ಹಾಡುವ ಈ ಹಾಡು ಇಡೀ ಕತ್ತಲ ರಾಜ್ಯದ ಸುಪ್ರಭಾತ. ಈ ಸಾಲುಗಳ ಆಶಯ ಪಂಪನ ‘ಮನುಷ್ಯ ಜಾತಿ ತಾನೊಂದೇ ವಲಂ’ ಅನ್ನು, ಕುವೆಂಪು ಅವರ ವಿಶ್ವಮಾನವ ಗೀತೆಯನ್ನು ನೆನಪಿಸು ವಂತಿವೆ. ಜಾತಿ– ಮತ, ಮೇಲು– ಕೀಳುಗಳನ್ನು ದಾಟಿ ಮನುಷ್ಯ ಏಕತೆಯನ್ನು ಸಾರುವ ಜಗತ್ತಿನ ಶ್ರೇಷ್ಠ ಮಾನವೀಯ ಕಾವ್ಯವಾಗಿ ನಿಲ್ಲುತ್ತದೆ.
ತಮ್ಮನ್ನು ಮಂಟೇದವರು, ಧರೆಗೆ ದೊಡ್ಡವರ ಶಿಶುಮಕ್ಕಳು ಎಂದು ಕರೆದುಕೊಳ್ಳುವ ನೀಲಗಾರರು ಚಾರಿತ್ರಿಕವಾಗಿ, ಸಾಂಸ್ಕೃತಿಕವಾಗಿ ಮಂಟೇಸ್ವಾಮಿ ಪರಂಪರೆಗೆ ಸೇರಿದವರು. ಮಂಟೇಸ್ವಾಮಿ ಮತ್ತು ಅವರ ಶಿಷ್ಯ ರಾಚಪ್ಪಾಜಿ ಅಕ್ಷರಸ್ಥರು ಹಾಗೂ ಕಾಲಜ್ಞಾನಿ ಸ್ವರ ವಚನಕಾರರು. ಮಂಟೇಸ್ವಾಮಿ ಬರೆದ 13 ವಚನಗಳು, ರಾಚಪ್ಪಾಜಿ ಬರೆದ 10 ಕೃತಿಗಳು ಯಾದಗಿರಿ ಜಿಲ್ಲೆ ಕೊಡೇಕಲ್ಲ ಮಠದಲ್ಲಿ ದೊರೆತಿವೆ. ಸಮಾಜವನ್ನು ತಿದ್ದಲು ತಂಬೂರಿ ಹಿಡಿದು ಕಾಲಜ್ಞಾನ, ಸ್ವರ ವಚನಗಳನ್ನು ಕಟ್ಟಿ ಸಾರುತ್ತಾ ಸ್ವತಃ ಮಂಟೇಸ್ವಾಮಿ ಕರ್ನಾಟಕದ ಉತ್ತರಭಾಗದಿಂದ ದಕ್ಷಿಣದ ಮೈಸೂರು ಸೀಮೆಗೆ ಸಂಚರಿಸಿದ್ದಾರೆ. ಮಂಟೇಸ್ವಾಮಿಯವರ ಬೊಪ್ಪೇಗೌಡನಪುರದ(ಮಂಡ್ಯಜಿಲ್ಲೆ) ಐಕ್ಯ ಗದ್ದುಗೆಯಲ್ಲಿ ಇಂದಿಗೂ ಇರುವ ಅವರ ಬಿರುದುಗಳು, ಕಂಡಾಯ, ಬಾರಿ, ತಂಬೂರಿಗಳು ಇದಕ್ಕೆ ಸಾಕ್ಷಿಯಾಗಿವೆ. ತಮ್ಮ ಗುರು ಮಂಟೇಸ್ವಾಮಿಗೆ ಮಠ, ಮನೆ ಕಟ್ಟಲು ಬೇಕಾಗುವ ಕಬ್ಬಿಣವನ್ನು ಭಿಕ್ಷೆ ತರಲು ಹಲಗೂರಿಗೆ ಹೋಗುವಾಗ ಸಿದ್ದಪ್ಪಾಜಿ ಸಹ ತಂಬೂರಿ ನುಡಿಸುತ್ತಾ ಭಿಕ್ಷೆ ಬೇಡುವ ಕಥೆ ಮಂಟೇಸ್ವಾಮಿ ಕಾವ್ಯದಲ್ಲಿದೆ.
ಕಂಡಾಯ, ತಂಬೂರಿ, ಜಾಗಟೆ, ಜೋಳಿಗೆ, ಬೆತ್ತ ಬಿರುದುಗಳನ್ನು ಧರಿಸಿ ರಾಜಕೀಯವಾಗಿ, ಸಾಮಾಜಿಕವಾಗಿ ಜನಜಾಗೃತಿಯಲ್ಲಿ ತೊಡಗಿದ ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿಯವರ ಪ್ರತಿನಿಧಿಗಳು ಮತ್ತು ಮುಂದುವರಿಕೆಯೇ ನೀಲಗಾರರು. ಊರೂರ ಮೇಲೆ ಮನೆ ಮನೆಗೆ ಹೋಗಿ ಗುರು ವಾಕ್ಯ ಹಾಡುವ ಇವರು ಭಿಕ್ಷುಕರಲ್ಲ. ಭಿಕ್ಷಾಟನೆ ನೀಲಗಾರರ ವೃತ್ತಿಯೂ ಅಲ್ಲ. ಜನರ ಬಳಿ ಹೋಗಿ ಬುದ್ಧ ಸಿದ್ದ ದಾಸ ಶರಣರು ಮಾಡಿದ ಉಪದೇಶದ ಪಳೆಯುಳಿಕೆಯ ಜಾನಪದ ರೂಪ ಇರಬಹುದು.
ನೀಲಿ ಎಂಬುದು ಬರಿ ನೀಲಿ ಅಲ್ಲ
ಮಂಟೇಸ್ವಾಮಿ ಮತ್ತವರ ಶಿಷ್ಯರ ಪವಾಡ ಲೀಲೆಗಳನ್ನು ಹಾಡುವವರು ‘ಲೀಲೆಗಾರ’ರು ನೀಲಗಾರರಾದರು ಎನ್ನುವುದಿದೆ. ನೀಲಿ ಪದ madnessನ ಜನಪದೀಯ ರೂಪವಾಗಿದ್ದು ಮಂಟೇಸ್ವಾಮಿ, ಸಿದ್ದಪ್ಪಾಜಿ, ಕಾಯಸಿದ್ದಿ ಸಾಧಿಸಿದ ಸಂಕೇತವಾಗಿ ನೀಲಿ (ಸಿದ್ದಿಯ ಉನ್ಮಾದ) ಸಾಧಕ ಅರ್ಥದಲ್ಲಿ ನೀಲಿಗಾರ, ನೀಲಗಾರ ಆಗಿರುವಂತೆ ವ್ಯಾಖ್ಯಾನಿಸಲೂಬಹುದು. ನೀಲಗಾರರು ಮಂಟೇಸ್ವಾಮಿ ಕಾವ್ಯದಲ್ಲಿ ಸಿದ್ದಪ್ಪಾಜಿಯನ್ನು ‘88 ನೀಲಿಗಳಲ್ಲಿ ಅತಿ ಮುದ್ದು ಘನನೀಲಿ ಸಿದ್ಧ’ ಎಂದು ಹಾಡುತ್ತಾರೆ. ಅವೈದಿಕ ಬೌದ್ಧ ವಜ್ರಾಯಾನಿ ಚೌರಾಸಿ ಸಿದ್ಧರು (84 ಸಿದ್ದರು), ಶೈವ, ಸೂಫಿ, ನಾಥ ಪರಂಪರೆಗಳ ಸಂಗಮವಾದ ನೀಲಗಾರರು ರುದ್ರಾಕ್ಷಿಧಾರಿ ಗುರುಕೇಂದ್ರಿತ ಪಂಥ. ವಚನ ಚಳವಳಿಯ ವೈಫಲ್ಯಗಳಿಗೆ ಸಂವಾದಿಯಾಗಿ ಪರ್ಯಾಯವಾದ ನಿರ್ಮಾಣ ಈ ಮಂಟೇಸ್ವಾಮಿ ಮತ್ತು ನೀಲಗಾರ ಪಂಥ.
ನೀಲಗಾರ ದೀಕ್ಷೆ
ನೀಲಗಾರರಲ್ಲಿ ಎಡಗೈ ಬಲಗೈ ದಲಿತರು, ಉಪ್ಪಾರ, ಪರಿವಾರ ನಾಯಕ, ಮಡಿವಾಳ, ಆಚಾರಿ, ಕುರುಬ, ಕುಂಬಾರ, ಗಾಣಿಗ, ಒಕ್ಕಲಿಗ, ವೀರಶೈವ ಲಿಂಗಾಯತ, ಮೊದಲಾದ ಎಲ್ಲಾ ಸಮುದಾಯದವರು ಇದ್ದಾರೆ. ಕೆಲ ಸಮುದಾಯದವರು ಹಾಡುತ್ತಾರೆ, ಕೆಲವರು ಆಚರಣೆಗಳಿಗೆ ಸೀಮಿತವಾಗಿರುತ್ತಾರೆ. ಈ ಎಲ್ಲಾ ಸಮುದಾಯಗಳು ಮಂಟೇಸ್ವಾಮಿ- ಸಿದ್ದಪ್ಪಾಜಿಗೆ ಒಕ್ಕಲಾಗಿ ನೀಲಗಾರ ದೀಕ್ಷೆ ಪಡೆಯುತ್ತಾರೆ.
ಕುಟುಂಬದ ಹಿರಿಯ ಮಗ ದೀಕ್ಷೆಗೆ ಅರ್ಹ. ಗುರುಪೀಠದ ಬುದಿಯವರು ಅಥವಾ ಪುರಷಕಾರಿ ಎಂಬವರು ನೀಲಗಾರ ದೀಕ್ಷೆ ನೆರವೇರಿಸುತ್ತಾರೆ. ತಲೆಕೂದಲು ತೆಗೆದು, ಸ್ನಾನ ಮಾಡಿ, ಹೊಸ ಬಿಳಿಪಂಚೆ ಕಟ್ಟಿ, ಮೈ ಕೈ ಮುಖ ತಲೆ ಹಣೆತುಂಬ ವಿಭೂತಿ, ಮಟ್ಟಿ ಕಪ್ಪು ಬಳಿದು ಪರಂಪರೆಯ ಸಂಕೇತಗಳಾದ ಜಾಗಟೆ, ಜೋಳಿಗೆ, ಬೆತ್ತ, ಕಂಡಾಯ ಬಿರುದುಗಳನ್ನು ಕೊಟ್ಟು ದೀಕ್ಷೆ ನೀಡಲಾಗುತ್ತದೆ.
ಸುಳ್ಳು ಹೇಳುವುದಿಲ್ಲ, ಕಳ್ಳತನ ಮಾಡುವುದಿಲ್ಲ, ಶೀಲವಂತನಾಗಿ, ತಾಯಿ– ತಂದೆ, ಗುರುಹಿರಿಯರಿಗೆ ಎದುರಾಡದೆ, ಒಳ್ಳೆ ಮಾತಾಡುತ್ತ ನಾಲ್ಕು ಮನೆ ಬೇಡಿ ತಂದು ನಾಲ್ಕಾರು ಜನರಿಗೆ ಅನ್ನ ಹಾಕುತ್ತೇನೆಂದು ನೀಲಗಾರ ಗುರು ಅಣತಿಯಂತೆ ವಚನ ಕೊಡುತ್ತಾನೆ. ದೀಕ್ಷೆ ಪಡೆದ ನೀಲಗಾರ ಮಂಟೇಸ್ವಾಮಿ ಪಂಥದ ಪ್ರವರ್ತಕನಾಗಿ, ಗುರುವನ್ನು ಕೀರ್ತಿಸುತ್ತಾ, ನೀತಿಬೋಧೆ ಸಾರುತ್ತಾ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಪ್ರಮುಖ ಸ್ಥಾನ ಪಡೆಯುತ್ತಾನೆ.
ನಾಲಿಗೆ ಮೇಲಿನ ಚರಿತ್ರೆಯಾಗಿ
ನೀಲಗಾರ ಮೇಳ ಮಂಟೇಸ್ವಾಮಿ ಪರಂಪರೆಗೆ ಸೀಮಿತವಲ್ಲ. ಮೌಖಿಕ ಕಥನಕಾರರಾಗಿ ನೀಲಗಾರರು ಇಡೀ ಕತ್ತಲರಾಜ್ಯದ ಹಲವು ಜನಪದ ಕಾವ್ಯಗಳನ್ನು ಪ್ರಸ್ತುತಪಡಿಸುತ್ತಾರೆ. ಮಂಟೇಸ್ವಾಮಿ- ಮಾದೇಶ್ವರ ಕಾವ್ಯಗಳ ಜೊತೆಗೆ ನಂಜುಂಡೇಶ್ವರ, ಬಿಳಿಗಿರಿರಂಗ, ಮುಡುಕುತೊರೆ ಮಲ್ಲಯ್ಯ, ಮೈಲಾಳರಾಮ, ಬಾಲನಾಗಮ್ಮ, ಅರ್ಜುನ ಜೋಗಿ, ಮೊದಲಾದ ಕಾವ್ಯಗಳನ್ನು, ಜಾಂಬು ಪುರಾಣ, ಬಸವ ಪುರಾಣಗಳನ್ನು ಹಾಡುತ್ತಾರೆ. ನೀಲಗಾರ ಕಲಾಮೇಳಗಳಲ್ಲಿ ದಲಿತ ಹಿಂದುಳಿದ ವರ್ಗಗಳ ಕೊಡುಗೆ ಹಾಗೂ ಭಾಗವಹಿಸುವಿಕೆ ಹೆಚ್ಚು. ಯಾವುದೇ ಕಾವ್ಯವನ್ನು ಅಹೋರಾತ್ರಿ ಹಾಡುವ ನೀಲಗಾರರದು ಒಂದು ವಿಸ್ಮಯ ಲೋಕ.
ನಿಜ ಅರ್ಥದಲ್ಲಿ ನೀಲಗಾರರು ಮೌಖಿಕ ಚರಿತ್ರೆಯ ವಕ್ತಾರರು. ಇವರ ಪರಂಪರೆ ಉಳಿದು ಬೆಳೆಯಲು ಕಾರಣೀಭೂತರು ಮಳವಳ್ಳಿ ರಾಚಯ್ಯ, ಗುರುಬಸವಯ್ಯ, ಕಾರಪುರದ ಪುಟ್ಟಮಾದಯ್ಯ, ಕೆಬ್ಬೇಪುರದ ರಾಚಯ್ಯ, ಕಂಸಾಳೆ ಮಹಾದೇವಯ್ಯ, ಮೋಳೆ ರಾಚಯ್ಯ ಅವರಂತಹ ನೂರಾರು ಮೇಳದವರು ಎನ್ನುತ್ತಾರೆ ಗುರುರಾಜ್. ಮಳವಳ್ಳಿ ಮಹಾದೇವಸ್ವಾಮಿ, ಮೈಸೂರು ಗುರುರಾಜ್, ಕೆಬ್ಬೇಪುರ ಸಿದ್ದರಾಜು, ಸಿದ್ಧಯ್ಯನಪುರದ ಕೈಲಾಸ ಮೂರ್ತಿಯಂತಹ ಹೊಸ ತಲೆಮಾರಿನ ಮೇಳದವರು ರಾಜ್ಯ, ದೇಶ, ವಿದೇಶದವರೆಗೆ ಕತ್ತಲರಾಜ್ಯದ ಮಾದೇಶ್ವರ- ಮಂಟೇಸ್ವಾಮಿ ಕಾವ್ಯಧಾರೆಯನ್ನು ವಿಸ್ತರಿಸುತ್ತಾ ಜೀವಂತ ಇರಿಸಿದ್ದಾರೆ.
ಮಂಟೇಸ್ವಾಮಿ ಕಾವ್ಯದ ಕರ್ತೃಗಳಾಗಿ...
ಕ್ರಿ.ಶ. 1589ರ ವೀರಸಂಗಯ್ಯನ ನಂದಿ ಆಗಮ ಲೀಲೆ, ಕ್ರಿ.ಶ. 1838ರ ದೇವಚಂದ್ರನ ರಾಜಾವಳಿ ಕಥಾಸಾರ ಕೃತಿಗಳು ಹಾಗೂ ಮಂಟೇಸ್ವಾಮಿ ಮತ್ತವರ ಶಿಷ್ಯರ ಐಕ್ಯ ಗದ್ದಿಗೆಗಳ ಮೌಖಿಕ ಆಕರಗಳ ಪ್ರಕಾರ ಮಂಟೇಸ್ವಾಮಿ 15ನೇ ಶತಮಾನದಲ್ಲಿದ್ದ ಚಾರಿತ್ರಿಕ ಸಿದ್ಧಪುರುಷ. ಚಾಮರಾಜನಗರ ಜಿಲ್ಲೆ ಕಾವೇರಿ ತೀರ ಪ್ರದೇಶದಿಂದ ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆ ಕೊಡೇಕಲ್ಲು ಬಸವಣ್ಣನ ಬಳಿ ಹೋಗಿ ಶಿಷ್ಯನಾಗಿ ಕಾಯಸಿದ್ಧಿ ಪಡೆದು ಕತ್ತಲರಾಜ್ಯಕ್ಕೆ ಹಿಂದಿರುಗುವ ಮಂಟೇಸ್ವಾಮಿ ಜೋತಿರ್ಲಿಂಗಯ್ಯ, ಧರೆಗೆ ದೊಡ್ಡಯ್ಯ ಎನಿಸುತ್ತಾರೆ. ಶಿಷ್ಯೆ ದೊಡ್ಡಮ್ಮನ ಜೊತೆ ಮಂಡ್ಯ ಜಿಲ್ಲೆ ಬೊಪ್ಪೇಗೌಡನ ಪುರದಲ್ಲಿ ಐಕ್ಯವಾಗುತ್ತಾರೆ. ಉಳಿದ ಶಿಷ್ಯರಾದ ರಾಚಪ್ಪಾಜಿ, ಚನ್ನಾಜಮ್ಮ, ಮೈಸೂರು ಜಿಲ್ಲೆ ಕಪ್ಪಡಿಯಲ್ಲು, ಮಂಟೇಸ್ವಾಮಿ ಉತ್ತರಾಧಿಕಾರಿ ಎನಿಸಿದ ದಳವಾಯಿ ಸಿದ್ಧಪ್ಪಾಜಿ ಚಾಮರಾಜನಗರ ಜಿಲ್ಲೆ ಚಿಕ್ಕಲ್ಲೂರಲ್ಲೂ, ಲಿಂಗಯ್ಯ ಚೆನ್ನಯ್ಯ ಕುರುಬನ ಕಟ್ಟೆಯಲ್ಲೂ ಐಕ್ಯವಾಗುತ್ತಾರೆ. ಇವರ ಶಿಶುಮಕ್ಕಳಾಗಿ ದೀಕ್ಷೆ ಪಡೆಯುವ ನೀಲಗಾರರು ಇವರೆಲ್ಲರನ್ನು ಧರೆಗೆ ದೊಡ್ಡವರೆಂದು ಕರೆಯುತ್ತಾರೆ. ಅವರ ಸಿದ್ಧಿ ಸಾಧನೆಯ ಚರಿತ್ರೆಯನ್ನು ನೀಲಗಾರರು ಧರೆಗೆ ದೊಡ್ಡವರ ಕಥೆ, ಮಂಟೇಸ್ವಾಮಿ ಕಾವ್ಯ ಎಂಬ ಹೆಸರಲ್ಲಿ ಸೃಜನಶೀಲ ಶ್ರೇಷ್ಠ ಮೌಖಿಕ ಕಥನವಾಗಿಸಿದ್ದಾರೆ.
Source: Prajavani https://bit.ly/2XPklxR
No comments:
Post a Comment