ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 11)

11. ಶ್ರೀ ಸಿದ್ದಪ್ಪಾಜಿಯ ಮಹಾತ್ಮೆ.

ಉರಿಗದ್ದಿಗೆಯ ಮೇಲೆ ಮಂಟೇಸ್ವಾಮಿ ಮಂಡಿಸಿರುವಾಗ ಹಿರಿಗುರು ರಾಜೇಂದ್ರಸ್ವಾಮಿ ಮತ್ತು ರಾಜಪಟ್ಟ ಈರಭದ್ರ ಸ್ವಾಮಿಗಳು ಅವರು ಪಾದಗಳಿಗೆ ಎರಗಿ ಸಕ್ಕರೆ ಪಟ್ಟಣದಿಂದ ಬರುವಾಗ ನೀವು ಬಸವನ ಬೆಟ್ಟವನ್ನು ಬೆಳ್ಳಿ ಮಾಡುತ್ತೇವೆ; ಕುಂದೂರು ಬೆಟ್ಟವನ್ನು ಚಿನ್ನ ಮಾಡುತ್ತೇವೆ ಎಂದು ನೀವು ಹೇಳಿದಿರಿ_ಆಡಿದ ಮಾತಿನಂತೆ ಮಾಡಿಕೊಡಿ ಎನ್ನುತ್ತಾರೆ. ಅದಕ್ಕೆ ಸ್ವಾಮಿ ಒಪ್ಪಿ, ಕುಂದೂರ ಬೆಟ್ಟವನ್ನು ಹತ್ತಿ ಕೈಯಲ್ಲಿದ್ದ ಕ೦ಡಾಯವನ್ನು ಬೆಟ್ಟದ ನೆತ್ತಿಗೆ ನೀಡುತ್ತಾರೆ. ಇಟ್ಟಿಗೆ ಗಾತ್ರದ ಅಪರಂಜಿ ಸಿಡಿದು ಮೇಲೆದ್ದು ಬಂದು ಬೀಳುತ್ತದೆ, ಆಗ ಸ್ವಾಮಿಗಳಿಬ್ಬರೂ ಸಂತೋಷವಾಗಿ "ಪ್ರಭು, ನೀವು ಕೇಳಿದ್ದನ್ನು ಕೊಡಬಲ್ಲಿರಿ ನಮ್ಮ ಬಳಿ ಚಿನ್ನ ಬೆಳ್ಳಿಗಳು ಹೆಚ್ಚಾಗಿ ಬಿಟ್ಟರೆ ಮುಂದೆ ಬರಲಿರುವ ಕಾಲ ಕಲಿಯುಗವಾದ್ದರಿಂದ ಅವು ಉಳಿಯಲಾರವು; ನಮ್ಮನ್ನು ಉಳಿಯಲಾರವು. ಆದ್ದರಿಂದ ದಯವಿಟ್ಟು, ಕ್ಷೇತ್ರವನ್ನು ಯೋಗ್ಯ ರೀತಿಯಲ್ಲಿ ಆಳಬಲ್ಲ, ಸದ್ಯಕ್ಕೆ ನಮ್ಮ ಪೂಜಾದಿಗಳಿಗೆ ನೆರವಾಗಬಲ್ಲ ಶಿಷ್ಯ ನೊಬ್ಬನನ್ನು ನಮಗೆ ಕರುಣಿಸಿಕೊಡಿ ಎನ್ನುತ್ತಾರೆ. ಅದಕ್ಕೆ ಸ್ವಾಮಿ ಒಪ್ಪಿ, ತಮ್ಮ ದಿವ್ಯದೃಷ್ಟಿಯಿಂದ ಈ ಮಠಕ್ಕೆ ಮೂರು ಲೋಕವೂ ಮೆಚ್ಚಿ ಕೊಂಡಾಡಬಹದಾದ ಶಿಷ್ಯನಾರೆ೦ದು ಗುರುತಿಸಿ, ಅವನತ್ತ ಹೊರಡುತ್ತಾರೆ.

  ನಿಡಗಟ್ಟಿಗ್ರಾಮದ ಬ್ರಹ್ಮಚಾರಿ ಮುದ್ದೋಜಿ ಲಿಂಗವಂತ ಪಾಂಚಾಳದವನು ತನ್ನ ಏಳು ಮಕ್ಕಳೊಡನೆ ಸಕಲೈಶ್ವರ್ಯ ಸಂಪತ್ತುಗಳಿಂದ ತುಂಬಿ ಬಾಳುತ್ತಾ ಇರುತ್ತಾನೆ, ಇವನಿಗೆ ಈ ಎಲ್ಲ ಐಶ್ವರ್ಯವು ಇವನ ಕಡೆಯ ಮಗನಾದ ಮರಿಕೆಂಪಣ್ಣ ಎಂಬ ತೇಜಸ್ವೀ ಮಗ ಹುಟ್ಟಿದ ಮೇಲೆ ಬಂದಿರುತ್ತದೆ. ಅವನು ತನ್ನ ಭಾಗ್ಯದಲ್ಲಿ ಐಶ್ವರ್ಯವನ್ನು ತಂದಂತೆಯೇ ವೈರಾಗ್ಯವನ್ನೂ ತಂದಿರುತ್ತಾನೆ. ಆದ್ದರಿಂದಲೇ ಅವರು ವಾಸಿಸುವ ಮನೆ ಸಕಲ ಭೋಗ ಭಾಗ್ಯಗಳ ಅರಮನೆಯಾಗಿದೆ. ಸ್ವಾಮಿ ಅರಮನೆಯ ಮುಂದೆ ಬಂದು ಡಂಗೂರವನ್ನು ಭಾರಿಸುತ್ತಾನೆ. ತನ್ನ ಅರಮನೆಯಬಾಗಿಲಿಗೆ ಬಂದ ಭಿಕ್ಷು ಸ್ವಾಮಿ ಏಳು ಕೋಟಿ ಸೂರ್ಯನಂತೆ ಪ್ರಕಾಶಿಸುತ್ತಿರುವುದನ್ನು ಕಂಡು ಆನಂದದಿಂದ ಹಿಗ್ಗಿ, ಭಕ್ತಿಯಿಂದ ಕುಗ್ಗಿ ಓಡೋಡಿ ಬಂದು ಸ್ವಾಮಿಯ ಪಾದಗಳಿಗೆ ಎರಗಿ ತ೦ದ ಮೊರದ ತುಂಬಾ ಮುತ್ತು ರತ್ನಾದಿಗಳನ್ನು ಕೊಡಲು ಬರುತ್ತಾಳೆ. ಆಗ ಸ್ವಾಮಿ "ನಿನ್ನ ಮನೆಯ ಮುತ್ತು ರತ್ನ ನನ್ನ ಮಠದ ಮುಗ್ಗಲು ಜೋಳ, ನಿನ್ನ ಅರಮನೆಯ ಬೆಳ್ಳಿ ಬಂಗಾರ ನನ್ನ ಮಠದ ಚೀಕು ಚಿಲುನಾನ. ಇದಲ್ಲ ನನಗೆ ಬೇಕಾಗಿರುವುದು!ಎನ್ನುತ್ತಾನೆ.
"ನನ್ನ ತಪ್ಪನ್ನು ಮನ್ನಿಸಿ ಬೇರೆ ಏನ ಬಯಸುವಿರಿ, ತಿಳಿಸಿ ಸ್ವಾಮಿ" ಎಂದು ಹೇಳುತ್ತಾಳೆ.
"ನನಗೆ ಬೇಕಾಗಿರುವುದು ನನ್ನಂತೆಯೇ ವೈರಾಗ್ಯದ ನಿಧಿಯಾದ, ನಿನ್ನ ಮನೆಯ ಮಗನಾಗಿ ಬೆಳೆಯುತ್ತಿರುವ ಕಿರಿಯ ಕೆಂಪಣ್ಣ, ನೀನು ನಿನ್ನ ಪತಿ ಒಂದೇ ದೃಢದಲ್ಲಿ ಮಗನನ್ನು ಎತ್ತಿ ನನ್ನ ನಾಲ್ಕು ಪಾದದ ಜೋಳಿಗೆಗೆ ಹಾಕಿಬಿಡಮ್ಮ. ಈ ಸುತ್ತಲ ಸೀಮೆಗೆ ನನ್ನಂತ ಸ್ವಾಮಿಯಾಗಿ, ಸುತ್ತಲ ಜನರನ್ನು ಆಳುವುದಿದೆ".
"ಅಯ್ಯೋ ಏನನ್ನೂ ಕೇಳಿಬಿಟ್ಟಿರಿ ಪ್ರಭು!_ ಅವನೇ ನನ್ನ ಮನೆಯ ಇಹಪರದ ಭಾಗ್ಯ. ಅವನಿಲ್ಲದೆ ನಾವು ಹೇಗೆತಾನೆ ಬದುಕಬಲ್ಲೆವು? ಆದರೂ ಯಾವುದಕ್ಕೂ ನನ್ನ ಪತಿದೇವರನ್ನು ಕೇಳಿ ಹೇಳುತ್ತೇನೆ. ನೀವು ಏಳು ಕೋಟಿ ಸೂರ್ಯ ಪ್ರಕಾಶರು ನಿಮಗೆ ಏನನ್ನು ಹೇಳಬೇಕು_ಎನನ್ನು ಹೇಳಬಾರದು, ತಿಳಿಯುತ್ತಿಲ್ಲ."
ಎಂದು ಓಡೋಡಿ ಬಂದು ಗಂಡನಿಗೆ ಸಂಗತಿಯನ್ನು ಹೇಳುತ್ತಾಳೆ ಗಂಡ ಮುದ್ದೋಜ ಸೊಕ್ಕಿನವನು ಆತ ಹೇಳುತ್ತಾನೆ:
"ಭಿಕ್ಷೆಗೆ ಬಂದವನು ಸೊಕ್ಕಿನ ಮಾತನ್ನು ಆಡುವುದೇ! ತಿರಿದು ತಿನ್ನಲು ಬಂದ ಪರದೇಶಿ ಕಿರಿಯ ಮಗನನ್ನೇ ಕೇಳುವುದೆ? ಛೀ ಛೀ_ಆ ಅಧಮನನ್ನು ಎಕತ್ತಿನ ಮೇಲೆ ಗುದ್ದಿ ಆಚೆಗೆ ದಬ್ಬು."
ಆಗ ಸ್ವಾಮಿ 'ನಾನು ಕೊಟ್ಟ ಮಗು ನನಗೇ ಇಲ್ಲವಾಯಿತೇ? ನನ್ನ ಮಗನ ನಿಜವ ಪರೀಕ್ಷಿಸಿ ನಾನೇ ಕರೆದುಕೊಂಡು ಹೋಗುವೆ! ಎಂದುಕೊಂಡು ಊರ ಮುಂದಲ ಕುಲುಮೆಯಲ್ಲಿ ಕೆಲಸ ಮಾಡುತ್ತಿರುವ ಕಿರಿಯ ಕೆಂಪಣ್ಣ ಬಳಿಗೆ ಸ್ವಾಮಿ ನೇರವಾಗಿ ಬರುತ್ತಾರೆ.

ಅಹಂಕಾರವೇ ಮೈವೆತ್ತಿ ಬಂದ ಕಿರಿಯ ಕೆಂಪಣ್ಣ ಭಿಕ್ಷೆಗಾಗಿ ಕುಲುವೆಯ ಬಳಿ ಬಂದ ಸ್ವಾಮಿಯನ್ನು ಕುರಿತು "ರಾಗಿ ಬೇಡಲು ಊರ ಹಬ್ಜಗಳ ಬಾಗಿಲಿಗೆ ಹೋಗು ಕಬ್ಬಿಣದ ಕುಲುಮೆಯಲ್ಲಿ ನೊಗದಂತಿರುವ ನಿನಗೇನು ಕೆಲಸ?" ಎನ್ನುತ್ತಾನೆ. ಆಗ ಸ್ವಾಮಿ ನಕ್ಕು." ರಾಗಿ ತಿಂದು ಜೀವಿಸುವವನು ನಾನಲ್ಲ ಭಂಗಿ ಕುಡಿದು ಜೀವಿಸುವವನು ನಾನು. ನನ್ನ ಸೇವೆಗೆ ತಕ್ಕ ಮಕ್ಕಳಾರೂ ಇಲ್ಲ ನೀನಾದರೂ ಭಂಗಿ ಸೇದಲು ಒಂದಿಷ್ಟು ಕೆಂಡ ಕೊಡು" ಎಂದು ಹೇಳುತ್ತಾರೆ ಕೆಂಪಣ್ಣ ರಣ ರಣಿಸುವ ದಪ್ಪದಪ್ಪ ಕೆಂಡಗಳನ್ನು ದಪ್ಪ ಇಕ್ಕಳದಲ್ಲಿ ಹಿಡಿದು "ಚೌಚೋ ನಿನ್ನ ಕೈಯಿಯನ್ನು ನೀನು ಕೇಳಿದ ಬೆಂಕಿ ಸಿದ್ಧವಿದೆ" ಎಂದು ಸ್ವಾಮಿಯು ನೀಡಿದ ಕೈಗಳಿಗೆ ಹಾಕುತ್ತಾನೆ. ಸ್ವಾಮಿ ಪ್ರೀತಿಯಿಂದ ಕೆಂಡವನ್ನು ಎರಡೂ ಕಣ್ಣುಗಳಿಗೆ ಒತ್ತಿಕೊಂಡು, ಭಂಗಿಯನ್ನೂ ಹೊತ್ತಿಸಿಕೊಂಡು ಕಡೆಗೆ ತಮ್ಮ ನಾಲ್ಕು ಪಾದದ ಜೋಳಿಗೆಗೆ ಹಾಕಿಕೊಳ್ಳುತ್ತಾರೆ.
ಆಗಲೂ ಕಿರಿಯ ಕೆಂಪಣ್ಣನಿಗೆ ಸ್ವಾಮಿಯ ನಿಜ ಏನೆಂದು ಅರಿವೇ ಆಗುವುದಿಲ್ಲ. ಸ್ವಾಮಿಗೆ 'ಈ ಐದನಿಗೆ ಸರಿಯಾದ ಪಾಠ ಕಲಿಸಬೇಕು'___ ಎಂದು ಒಂದೇ ಮನದಲ್ಲಿ ನಿರ್ಧರಿಸುತ್ತಾರೆ. ಮಾರಳ್ಳಿಯ ಕುಂಡಮಾರಿ ಮುದ್ದೋಜಿ ಮನೆಯ ದೇವತೆ, ಅವಳನ್ನು ಕರೆದು, "ನಿನ್ನ ಭಕ್ತನ ಮನೆಯಾದ ಮುದ್ದೋಜಿಯ ಅರಮನೆಯನ್ನು ತೊಡೆದುಹಾಕು" ಎನ್ನುತ್ತಾರೆ. ಸ್ವಾಮಿ ಮಂಟೇದ ಅಯ್ಯ, ಅದು ನನ್ನ ಭಕ್ತನ ಮನೆ, ನನ್ನ ಮನೆ ಸ್ವಾಮಿ 'ನನ್ನ ಮನೆಯನ್ನು ನಾನೇ ಹೇಗೆತಾನೆ ಹಾಳುಮಾಡಲಿ? ನನ್ನ ಮಕ್ಕಳನ್ನು ಹೇಗೆ ನುಂಗಿ ನೀರ ಕುಡಿಯಲಿ? ಎಂದು ಮರುಪ್ರಶ್ನೆ, ಹಾಕುತ್ತಾರೆ. ಅವಳಿಗೆ ಸ್ವಾಮಿಯ ಜೀವನದ ದಿವ್ಯದೃಷ್ಟಿ ಅರಿವೇ ಆಗುವುದಿಲ್ಲ. ಆಗ ಸ್ವಾಮಿ ಚೆಂಡಾಳ ದೇವಿಗೆ ಚಪ್ಪಲಿ ಪೂಜೆಯೋ ಸರಿ ಎಂದು ಜೋಳಿಗೆಯಿಂದ ಉರಸಂಗಿ ಕೊರಡನ್ನು ಹೊರತೆಗೆದು ಮೂರು ಎಳೆತವನ್ನು ಎಳೆಯುತ್ತಾರೆ ಮೈ ಕೈ ಎಲ್ಲಾ ಸುಟ್ಟುಹೊಗ ತೊಡಗಿದಾಗ ಅವಳಿಗೆ ತಾನು ಮಾಡಿದ ತಪ್ಪು ಅರ್ಥವಾಗುತ್ತಿದೆ. ಸ್ವಾಮಿಯ ಕ್ಷಮೆ ಕೇಳಿ, ಸ್ವಾಮಿಯ ಆಜ್ಞೆಯನ್ನು ಹೊತ್ತಾಳು ಮುದ್ದೋಜಿಯ ಅರಮನೆ ಸ್ಮಶಾನವಾಗಲು ಆರಂಭವಾಗುತ್ತದೆ. ಮಕ್ಕಳೆಲ್ಲಾ ಸತ್ತು ಬೀಳುತ್ತಾರೆ ಚಿನ್ನಬೆಳ್ಳಿ ಎಲ್ಲಾ ಮಣ್ಣಾಗುತ್ತದೆ ದನ ಕರುಗಳೆಲ್ಲಾ ಬೂದಿಯಾಗಿ ಬಿಡುತ್ತವೆ. ಸೊಸೆರೆಲ್ಲಾ ಸಾಯುತ್ತಾರೆ. ತಂದೆ ತಾಯಿಗಳಾದ ಮುದ್ದೋಜ ಲಿಂಗಮ್ಮರು ಈ ಎಲ್ಲಾ ಕಷ್ಟ ನೋಡಲಾರದೇ ಸಾಯುತ್ತಾರೆ. ಉಳಿದ ಒಬ್ಬನೇ ಒಬ್ಬನಾದ ಕೆಂಪಣ್ಣನಿಗೆ ಹುಚ್ಚು ಹಿಡಿಯುತ್ತದೆ. ಅವನು ಊರ ತುಂಬೆಲ್ಲಾ ಪೇಚಾಡುತ್ತಾ ತಿರುಗಾಡುತ್ತಾನೆ. ತನ್ನ ಮಸಿ ಭ್ರಮಣಕ್ಕೆ ಕಾರಣ ತಿಳಿಯುತ್ತದೆ. ಸ್ವಾಮಿಯನ್ನು ಆಂತರ್ಯದಲ್ಲಿಯೇ ಪ್ರಾರ್ಥಿಸುತ್ತಾನೆ. ಸ್ವಾಮಿ ನೆಲೆಸಿರುವ ಕುಂದೂರು ಬೆಟ್ಟಕ್ಕೆ ಬರುತ್ತಾನೆ. ಆಗ ಸ್ವಾಮಿ ಶಿಷ್ಯನನ್ನು ಪರೀಕ್ಷಿಸುತ್ತಾನೆ; "ಏನು ಕೆಂಪಣ್ಣ, ಈಗಲಾದರೂ ನೀನು ನನ್ನ ಶಿಷ್ಯನಾಗುವೆ ಏನು? ಎಂದು ಸ್ವಾಮಿ ಕೇಳಿದ್ದಕ್ಕೆ "ನನಗೆ ನೀವು ಏನನ್ನು ಕೊಡುತ್ತೀರಿ? ಎನ್ನುತ್ತಾನೆ. ಸ್ವಾಮಿ "ನಿನಗೆ ನಾವು ಭಿಕ್ಷೆ ಬೇಡುವ ಜೋಳಿಗೆ, ನಿನ್ನ ಇನ್ನೂ ಮುರಿಯದ ಅಹಂ ಕೊಲ್ಲಲು ಯೋಗ್ಯವಾದ ಶಿಕ್ಷೆಗಳನ್ನು ಮಾತ್ರ ಕೊಡುತ್ತೇನೆ ಅದರಲ್ಲಿ ನೀನು ಗೆದ್ದರೆ ನಿನ್ನನ್ನೂ ನನ್ನಂತೆಮಾಡುತ್ತೇವೆ" ಎನ್ನುತ್ತಾರೆ, ಅದಕ್ಕೆ ನೋಡಿ ಕೆಂಪಣ್ಣ ನಗುತ್ತಾನೆ.

"ನಿಮ್ಮಂತ ಅ೦ದರೆ ಭಿಕ್ಷದವನನ್ನಾಗಿ ಮಾಡುವಿರೇನು?___ ನಿಮ್ಮಲ್ಲಿ ಕೊಡಲು ಇನ್ನೇನಿದೆ" ಎಂದು ಹಂಗಿಸುತ್ತಾನೆ, ಆಗ ಸ್ವಾಮಿ ಅವನನ್ನು ಹಗ್ಗದಲ್ಲಿ ಬಿಗಿದು ಎಳೆದುಕೊಂಡು ಕಾಳಿಂಗಗಳ ಗವಿಯ ಬಳಿಗೆ ಬರುತ್ತಾರೆ ಗವಿಯ ಬಳಿಯ ಏಳು ಸಿದ್ಧರು ಸ್ವಾಮಿಯನ್ನು ಕಂಡು ನಮಸ್ಕಾರ ಮಾಡಿನಿಲ್ಲುತ್ತಾರೆ. ಆಗ ಸ್ವಾಮಿ "ಸಿದ್ಧರಿಗೆಲ್ಲ ಸಿದ್ಧನಾದ ಸ್ವಾಮಿಯೋರ್ವನನ್ನು ನಾನು ಈಗ ಪಡೆಯುವೆ. ಆ ಸಿದ್ದನಿಗೆ ನೀವು ಇರುವ ಸ್ಥಳದಲ್ಲೇ ಸ್ಥಳವನ್ನು ಕೊಡಿ" ಎನ್ನುತ್ತಾರೆ. ಆಗ ಸಿದ್ದರು ಈತನ ಹೆಚ್ಚಿನ ಸಿದ್ಧಿಸಾಧನೆ ಪವಾಡಗಳೂ ನಮಗೆ ಬೇಡ ಈತ ನಾವು ಸವಾರಿ ಮಾಡುವ ಹೇಳೆಜ್ಜೆಯ ಕರಿಯ ಹುಲಿಯನ್ನು ಹತ್ತಿ ಏಳು ಸಾರ ಕುಂದೂರು ಬೆಟ್ಟವನ್ನು ಸುತ್ತಲಿ ಅಷ್ಟು ಮಾಡಿದರೆ ಸಾಕು-ನಾವಿರುವ ಜಾಗವನ್ನೇ_ಏಳು ಉಪ್ಪರಿಗೆಯ ಕಾಳಿಂಗನ ಗವಿಯನ್ನೇ ಬಿಟ್ಟು ಕೊಟ್ಟು ಬಿಡುತ್ತೇವೆ" ಎನ್ನುತ್ತಾರೆ. ಹಾಗೆ ಅವರುಗಳು ಅನ್ನುತ್ತಿರುವಾಗಲೇ ಹೇಳೆಜ್ಜೆಯ ಕರಿಯ ಬರಗ ಆಕಾಶವನ್ನು ಭೂಮಿಯನ್ನು ಒಂದು ಮಾಡುತ್ತಾಬರುತ್ತದೆ ಸ್ವಾಮಿಯಿಂದ ಉರಾಸಂಗಿ ಕೊರಡನ್ನು ಕೆಂಪಣ್ಣಗೆ ಕೊಟ್ಟು ಅವನನ್ನು ಹುಲಿಯ ಬೆನ್ನಿನ ಮೇಲೆ ಕೂರಿಸಿಬಿಡುತ್ತಾರೆ. ಕೆಂಪಣ್ಣ ಉರಸ೦ಗಿ ಕೊರಡಿನಲ್ಲಿ ಹುಲಿಗೆ ಹೊಡೆದುದೆ ತಡ-ಹುಲಿ ರುದ್ರ ನಾಗಿ ಪ್ರಳಯದ ಮೇಲೆ ಪ್ರಳಯ ಸೃಷ್ಟಿಸುತ್ತಾ ಬ್ರಹ್ಮಾಂಡವನ್ನೆಲ್ಲಾ ಜಿಗಿದಾಡಿ ಕೆಂಪಣ್ಣನನ್ನು ಮೇಲಿನಿಂದಲೇ ಎತ್ತಿ ಕಾಳಿಂಗನ ಏಳು ಮಾಳಿಗೆಯ ಸುರಂಗದ ಒಳಕ್ಕೆ ಎತ್ತಿ ಎಸೆದು ಬಿಡುತ್ತದೆ.

ಕೆಂಪಣ್ಣನನ್ನು ಕಾಳಿಂಗ ಗವಿಗೆ ಎಸೆದ ಮೇಲೆ ಏಳು ದೀರ್ಘ ವರ್ಷಗಳ ಕಾಲ ಸ್ವಾಮಿ ಆತನನ್ನು ಮರತೇ ಬಿಟ್ಟಿದ್ದರಂತೆ. ಒಂದು ದಿನ ನೆನಪು ಮಾಡಿಕೊಂಡು, ಮಡಿವಾಳ ಮಾಚಯ್ಯನನ್ನು ಕರೆದು ವಿಚಾರ ತಿಳಿಸಿ' ಕೆಂಪಣ್ಣನನ್ನು ಅವನು ಇನ್ನೂ ಬದುಕಿಯೇ ಇದ್ದರೆ ಕರೆದುಕೊಂಡು ಬನ್ನ_ಎಂದು ಹೇಳಿ ಕಳುಹಿಸುತ್ತಾರೆ.
ಮಡಿವಾಳರು ಕುಂದೂರು ಬೆಟ್ಟಕ್ಕೆ ಬಂದು, ಏಳು ಮಾವಿನ ಮರದ ಬಳಿಗೆ ಬಂದು, ಕಾಳಿಂಗನ ಹುತ್ತದತ್ತ ಕೆಂಪಣ್ಣನ ಹೆಸರನ್ನು ಹಿಡಿದು ಕೂಗುತ್ತಾರೆ, ಕೆಂಪಣ್ಣ ನಮ್ಮ ಸ್ವಾಮಿಯ ಧ್ಯಾನದಲ್ಲಿದ್ದವನನ್ನು ನಿಧಾನವಾಗಿ ಮಗ್ಗುಲಾಗುತ್ತಾನೆ. ಈ ಏಳೂ ವರ್ಷ ಅವನಿಗೆ ಅನ್ನ ಆಹಾರಗಳೆಲ್ಲ; ನಿದ್ದೆ ನೀರಡಿಕೆಗಳಿಲ್ಲ, ಭಂಗಿಯೂ ಇಲ್ಲ; ಅವನ ನೆತ್ತಿಯ ಮೇಲೆ ಹನ್ನೆರಡು ಆಳುದ್ದ ಹುತ್ತ ಬೆಳೆದಿದೆ; ಹೆಕ್ಕತ್ತಿನ ಮೇಲೆ ಮತ್ತಿಯ ಮರ ಬೆಳೆದಿದೆ; ಕಿವಿಯ ಗೂಡಿನಲ್ಲಿ ಶಕುನದ ಹಕ್ಕಿ ಮರಿಗಳನ್ನೂ ಹರಡಿವೆ; ಕಣ್ಣಿನ ರೆಪ್ಪೆಯ ಒಳಗೆ ಹೇಜ್ಜೇನು ಗೂಡ ಕಟ್ಟಿದೆ; ನಡುನಾಲಿಗೆಯ ಮೇಲೆ ಗಿಡಮರಾದಿಗಳು ಬೆಳೆದಿವೆ.
ಆಗ ದಿವ್ಯದೃಷ್ಟಿಯನ್ನು ಶಿಷ್ಯನ ಸ್ಥಿತಿಯನ್ನು ಕಂಡ ಮಂಟೇಸ್ವಾಮಿ "ಬಾ ಮಗನೇ ನೀನು ನಿದ್ದನಾನೆ ಇಂದು ಎದ್ದು ಬಾ ಮಗನೆ" ಎಂದು ಕರೆಯಲಾಗಿ, ಕೆಂಪಣ್ಣ ಎಲ್ಲವನ್ನೂ ಒದರಿಕೊಂಡು, ಕೊಡವಿಕೊಂಡು ಕ್ಷಣಾರ್ಧದಲ್ಲಿ ಎದ್ದು ಸ್ವಾಮಿಗೆ ಎರಿಗಿ ನಮಸ್ಕಾರ ಮಾಡುತ್ತಾನೆ ಹಿರಿಯ ಗುರು ರಾಜೇಂದ್ರ ಸ್ವಾಮಿಗೆ, ರಾಜಪಟ್ಟದ ಈರಭದ್ರಸ್ವಾಮಿಗೆ ಮಡಿವಾಳ ಮಾಚಿದೇವನಿಗೆ ದಿಗ್ಭ್ರಮೆ ಸಂತೋಷ ಎಲ್ಲವೂ ಆಗುತ್ತದೆ ಕೆಂಪಣ್ಣ ಸೂರ್ಯ ಪ್ರಕಾಶದಲ್ಲಿ ಪ್ರಜ್ವಲಿಸುತ್ತಾ. "ಸ್ವಾಮಿ ನಾನು ನಿಮ್ಮಂತೆಯೇ ಶಿವನಾದೆ; ಪರವಸ್ತುವಾದೆ. ನಾನೇ ನೀವಾದೆ" ಎನ್ನುತ್ತಾನೆ.
ಮಲ್ಲಿಗೆ ಮಾದೇವಿ ಬಂದು ಕೆಂಪಣ್ಣನಿಗೆ ಆರತಿ ಬೆಳಗುತ್ತಾಳೆ. ಗಣ೦ಗರು ಯತಿಗಳು, ಕಿನ್ನರೆಯರು ಕೆಂಪಣ್ಣ ಸಿದ್ಧನಾದ ಕಾರಣ ಸಾಲು ದೀವಟಿಗೆ ಹಿಡಿದು ನಿಲ್ಲುತ್ತಾರೆ. ಸ್ವಾಮಿ ಕೆಂಪಣ್ಣನನ್ನು ಕರಿಯ ಕಂಬಳಿಯ ಗದ್ದುಗೆಯ ಮೇಲೆ ಕೂರಿಸಿ ಕಳಸ ಕನ್ನಡಿ ಬೆಳಗಿ, ಸಾಮ್ರಾಣಿ, ಕರ್ಪೂರ ಪ್ರಜ್ವಲಿಸಿ, ಕಾವಿ ತೊಟ್ಟು ಪರಮ ಪರಂಜ್ಯೋತಿಯಾಗಿ ಕುಳಿತಿರುವ ಆತನಿಗೆ ಲಾಂಚನ ಕಟ್ಟಿ. ಗುರು ಪಟ್ಟದ ದೀಕ್ಷೆಕೊಟ್ಟು, ಆತನ ಹೆಸರನ್ನು ಘನಲೀಲೆಯ ಸಿದ್ದಯ್ಯ ಸ್ವಾಮಿ'- ಎಂದು ನಾಮಕರಣ ಮಾಡುತ್ತಾರೆ.

  ಗುರುಪಟ್ಟ ಸ್ವೀಕರಿಸಿ, ಮಾಚಯ್ಯನವರ ನಡೆಮುಡಿಯ ಮೇಲೆ ನಡೆಯುತ್ತಾ, ಮಲ್ಲಿಗೆ ಮಾದೇವಿ ಕೈಯಲ್ಲಿ ದೀವಟಿಗೆ ಹಿಡಿದುಕೊಂಡು, ಎಡಬಲದಲ್ಲೆಲ್ಲಾ ಶರಣರ ಕೂಡಿ, ಬೊಪ್ಪಣಪುರದ ಅ೦ತಕ್ಕೆ ಬರುತ್ತಿದ್ದಂತೆಯೇ, ಪ್ರೇಯಸಿಯನ್ನು ಹೆಗಲ ಮೇಲೆ ಹೊರುತ್ತಾ ಅಜ್ಜಯನ್ನು ಡೆಸಿಕೊಂಡು ಬರುತ್ತಾ ಇರುವ ಕಲಿ ಪುರುಷ ಎದುರಾಗುತ್ತಾನೆ.
ಆಗ ಮಂಟೇಸ್ವಾಮಿ ತಾವು ಉತ್ತರದಿಂದ ಬರುವ ಪೂರ್ವದಲ್ಲಿ ನುಡಿದಿದ್ದ ಕಾಲಜ್ಞಾನ ತಮ್ಮ ಕಣ್ಣಿನ ಮುಂದೆಯೇ ಆಗಿ ಹೋಗುತ್ತಿರುವುದನ್ನು ಕಂಡು, ಜೋಳಿಗೆಯಿಂದ ದೂಳ್ತವನ್ನು ತೆಗೆದು ಕಲಿಯಮೇಲೆ ಚೆಲ್ಲುತ್ತಾರೆ. ಕಲಿ ಕಲ್ಲಾಗಿ ನಿಂತುಬಿಡುತ್ತಾನೆ.
ಸಿದ್ದಯ್ಯಸ್ವಾಮಿ ನಿರ್ವಿಜ್ಞವಾಗಿ ಮಠಕ್ಕೆ ದಯಮಾಡಿಸಿ ರಾಯ ಚಂದ್ರಶಾಲೆಯಲ್ಲಿ ಮೂರ್ತವಾಗುತ್ತಾರೆ.
ಬೊಪ್ಪಣ್ಣಪುರದ ಭಕ್ತರಿಗೆ ಶ್ರೇಯಸ್ಸನ್ನು ಕರುಣಿಸಲು ಆರಂಭಿಸುತ್ತಾರೆ.

ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
12. ಹಲಗೂರು ಪಾಂಚಾಳಗೇರಿಗೆ ಹೋಗಿಬಾರೋ ಘನನೀಲಿ.  

👈 ಹಿಂದಿನ ಸಂಚಿಕೆ:
10. ರಾಜಬೊಪ್ಪಣಪುರ ಅಥವಾ ಒಪುಗ೦ಡಪುರ ಅಥವಾ ಬೊಪ್ಪಗೊ೦ಡನ ಪುರದ ಸ್ಥಾಪನೆ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/YsKDU6
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/zcsm5S
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/LZBgfo
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh 

No comments:

Post a Comment