ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 6)

6. ಕಲ್ಯಾಣಬಿಟ್ಟು ಪರಂಜ್ಯೋತಿಸ್ವರೂಪರು ಕೊಡೆಕಲ್ಲಿಗೆ ಬಿಜಯ ಮಾಡಿಸುತ್ತಾರೆ.

ಕಲ್ಯಾಣವನ್ನು ಬಿಟ್ಟು ಕೊಡೆಯ ಕಲ್ಲಿಗೆ ಬಂದ ಪ್ರಭುದೇವರು, ಬಿಡಾರ ಮಾಡಲು ಎಡೆ ಹುಡುಕಿ, ಕೋಡು ಬಂಡೆಯ ಮೇಲೆ ಅವರು ತಮ್ಮ ಪರಿವಾರವಾದ ರಾಚರಾಜ, ಪಲಾರದಯ್ಯ, ಚೆನ್ನಾಜಮ್ಮ ಕೊಡಗೂಡಿ ಬಿಡಾರ ಮಾಡುತ್ತಾರೆ. ಆಗ ಕೋಡು ಬಂಡೆಯ ಕೊಡೆ ಕೂಡೀ ಆಗಿ ಬೆಳೆದು ಅವರಿಗೆ ಬಿಡಾರ ಮಾಡಿಕೊಡಲು ವ್ಯವಸ್ಥೆ ಮಾಡುತ್ತಾರೆ. ಹುಲ್ಲೆ ಚರ್ಮವನ್ನು ಹಾಸಿಕೊಂಡ ಸ್ವಾಮಿ ಹುಲಿಯ ಚರ್ಮವನ್ನು ಹೊದ್ದು ಹಾಗೆಯೇ ನಿದ್ದೆ ಹೋಗಿಬಿಡುತ್ತಾನೆ. ಆದರೆ ಕಿಡಿಗಣ್ಣ ರಾಚಪ್ಪಾಜಿಗೆ ನಿದ್ದೆಯೇ ಬರುವುದಿಲ್ಲ, ಅವರು ಯೋಚಿಸುತ್ತಾ ಹೋದಂತೆ ಹತ್ತಿರದಲ್ಲೇ ವಿಜಯ ನಗರವೆಂಬ ಗಾರುಡಿಗರ ಪಟ್ಟಣ ಒಂದು ಇರುವುದು. ಅಲ್ಲಿನ ಏಳುನೂರು ಮಕ್ಕಳು, ಆಹಾರಾದಿಗಳನ್ನು ಸೇವಿಸಿ ದನಕರುಗಳನ್ನು ಬಿಟ್ಟುಕೊಂಡು ಊರ ಒಳಗೆರೆಗೆ ಒಂದು ಗೋಲಿ,ಗೆಜ್ಜುಗೆ, ಆಡುತ್ತಿರುವ ಗೋಚರಿಸುತ್ತದೆ. ಅವರೊಡನೆ ಆಟವನ್ನಾದರೂ ಆಡಬಾರದೇಕೆ ಎಂದು ಅವರು ಓಡೋಡಿ ಬಂದು ಆ ಮಕ್ಕಳೊಡನೆ ಆಟವಾಡಿ, ಅವರುಗಳ ಆಟದ ಸಾಮಾನುಗಳನ್ನು ಗೆದ್ದುಕೊಂಡು, ಅವರೆಲ್ಲರಿಗೆ ಕೋಪ ಬರುವಂತೆ ಮಾಡಿ ಬಿಡುತ್ತಾರೆ. ಆ ಗಾರುಡಿಗರ ಮಕ್ಕಳು ಎಂದೂ ಸೋತು ಗೊತ್ತಿರಲಿಲ್ಲವಾಗಿ "ಏಯ್, ನೀನು ಗೆದ್ದಿರುವ ಆಟದ ಸಾಮಾನುಗಳನ್ನು ಹಿಂದಕ್ಕೆ ನಮಗೇ ಕೊಟ್ಟುಬಿಡು__ಇಲ್ಲದಿದ್ದರೆ ವಿಷಯವನ್ನು ನಮ್ಮ ಹೊತ್ತಯ್ಯ ಮುತ್ತಯ್ಯರಿಗೆ ಹೇಳುತ್ತೇವೆ" ಎಂದು ಎದುರಿಸುತ್ತಾರೆ.
ಅದಕ್ಕೆ ರಾಚಯ್ಯನವರು "ನಾನು ಸೋತಿದ್ದರೆ ನೀವುಗಳು ಹೇಗೆ ಅವುಗಳನ್ನು ಹಿಂದಿರುಗಿಸುತ್ತಿರಲಿಲ್ಲವೋ ಹಾಗೆಯೇ ನಾನು ಹಿಂದಿರುಗಿಸುವುದು ಸಾಧ್ಯವಿಲ್ಲ" ಎಂದು ಹೇಳಿ ಬಿಡುತ್ತಾರೆ. ಈ ಮಾತನ್ನು ಕೇಳಿದ ಗಾರುಡಿಗರ ಮಕ್ಕಳು ಹೋಗಿ ತಮ್ಮ ಎಳುನೂರು ಹೊತ್ತಯ್ಯ ಮುತ್ತಯ್ಯರಿಗೆ ನಡೆದ ಸಂಗತಿಯನ್ನು ಹೇಳುತ್ತಾರೆ. ಆಗ ಆ ಗಾರುಡಿಗರು "ಕೇಳಿಕೋ ಕೇಳಿ ನಾವು ಮುಡಿ ಬಳಿ ಒಳಗೆ ಏಳು ಸುತ್ತಿನ ಕೋಟೆ ಕಟ್ಟಿಸಿದ್ದೇವೆ. ಯಾವನೋ ಪರದೇಸಿ ಹುಡುಗ ಬಂದು ನಮ್ಮ ಮಕ್ಕಳ ಆಟವನ್ನೇ ಕೆಡಿಸಿದ್ದಾನೆ. ಬನ್ನಿ, ನಾವೆಲ್ಲಾ ಹೋಗಿ ಅವನ ಮೇಲೆ ಘನಮೋಡಿ ಹಾಕಿ. ಅವನು ತಲೆ ಎತ್ತದಂತೆ ಮಾಡಿಬಿಡೋಣ" ಎಂದು ಊರ ಅಂಕಣಕ್ಕೆ ಬರುತ್ತಾರೆ. ರಾಚಯ್ಯನನ್ನು ಪರದೇಶಿ ಎಂದು ದೂಷಿಸಿ, ಸೀತಾಳೆ ಚಪ್ಪರ ಹಾಕಿ, ಅದರ ಮುಂದೆ ಆಳುದ್ದ ಬಾವಿ ತೆಗೆಸಿ, ಬಾವಿಯನ್ನು ಕಳ್ಳಿ ಮತ್ತು ಎಕ್ಕದ ಹಾಲಿನಿಂದ ತುಂಬಿ, ನಡು ಚಪ್ಪರದಲ್ಲಿ ಕೋಣನನ್ನು ಕಡಿದು ಕೋಣನ ತಲೆಯ ಮೇಲೆ ರಾಗದೀವಿಗೆ ಎತ್ತಿ, ರಾಗ ದೀವಿಗೆಯ ಒಳಗೆ ಬಂಗಾರವನ್ನೇ ಇಡುತ್ತಾರೆ. ಅಕ್ಕಿಯನ್ನು ಕೆಲವರು. ವಿಭೂತಿಯನ್ನು ಕೆಲವರು ಮಂತ್ರಿಸುತ್ತಾರೆ. ಇನ್ನು ಕೆಲವರು ಅಟ್ಟಸ ಳನ್ನೂ, ಮತ್ತೆ ಕೆಲವರು ಜಲಸ್ಥಳವನ್ನು ನಡೆಸಿ,
"ಈ ಮೋಡಿಯನ್ನು ಎತ್ತಿಕೋ ಪರದೇಶಿ. ನೀನು ಹಾಗೆ ಈ ಮೋಡಿಯನ್ನು ಎತ್ತಿದುದೇ ಆದರೆ ನಮ್ಮ ಎಲ್ಲ ಬಿರುದು ಭಿಕ್ಷೆಗಳನ್ನೆಲ್ಲಾ ನಿನಗೆ ಕೊಟ್ಟು ಬಿಡುತ್ತೇವೆ" ಎಂದು ಸಾರುತ್ತಾರೆ. ಆಗ ರಾಚಯ್ಯಸ್ವಾಮಿ "ನಾವು ಮೋಡಿಯನ್ನು ಎತ್ತದೇ ಹೋದರೆ ನಮ್ಮ ಬಿರುದು ಭಿಕ್ಷೆಗಳನ್ನೂ ನಿಮಗೆ ಕೊಟ್ಟು ಬಿಡುತ್ತೇವೆ." ಎಂದು ಪಂಥಕ್ಕೆ ನಿಂತು, ಕಾಲಿಗೆ ಹುರಿಗೆಜ್ಜೆ ಕಟ್ಟಿಕೊಂಡು. ಕುಣಿದು, ಪ್ರಭುದೇವಾದಿ ದೇವತೆಗಳನ್ನು ಸ್ಮರಿಸಿ, ಬಾವಿಗೆ ಇರಿದು, ಅಲ್ಲಿನ ಕಳ್ಳಿ ಎಕ್ಕದ ಹಾಲನ್ನು ಬರಿದು ಮಾಡಿ, ಮೇಲೆ ಜಿಗಿದು ಕೋಣನ ತಲೆಯ ರಾಗದೀವಿಗೆಯನ್ನು ಕಾಲಿನಲ್ಲಿ ಒದ್ದು ಅದರಲ್ಲಿದ್ದ ಬಂಗಾರವನ್ನು ತೆಗೆದುಕೊಂಡು ತಮ್ಮ ಪೂರ್ವ ರಂಗಕ್ಕೆ ಜಿಗಿದು ಕುಣಿಯತೊಡಗುತ್ತಾರೆ, ಅದನ್ನು ಕಂಡ ಗಾರುಡಿಗರು ಬೆಚ್ಚಿ ಬಿದ್ದು ಬಿಡುತ್ತಾರೆ. ಆಗ ಏಳು ವರುಷದ ರಾಚರಾಯರು "ಈಗ ನಾನೊಂದು ಮೋಡಿಯ ಹಾಕುವೆ__ ನೀವು ಏಳುನೂರು ಜನರೂ ಎತ್ತಿರಿ" ಎಂದು ಹೇಳಿ ತಮ್ಮ ಮುತ್ತಿನ ಕಮಂಡಲವನ್ನು ಜೋಳಿಗೆಯಲ್ಲಿ ಮಂತ್ರಿಸಿ ಇಟ್ಟು, ಬೆತ್ತದಲ್ಲಿ ಮೂರು ಮಂಡಲ ಬರೆದು ಅದರಲ್ಲಿ ಇಡುತ್ತಾರೆ. ಆ ಏಳುನೂರು ಗಾರುಡಿಗರೂ ಮೊಡಿ ತೆಗೆಯುವ ಎಲ್ಲ ಮಂತ್ರ ಮಾಟಗಳನ್ನು ಮಾಡಿ ಕಮಂಡಲ ಎತ್ತಲು ಹೋಗಿ, ರಕ್ತ ಕಾರುತ್ತಾ ಬಿದ್ದು ಸಾಯುತ್ತಾರೆ. ಆಗ ಗಾರುಡಿಗರ ಹೆಂಡಿರು ಮಕ್ಕಳೆಲ್ಲಾ ಬಂದು ಸತ್ತು ಬಿದ್ದಿರುವವರ ಮುಂದೆ ದುಃಖ ತಪ್ತರಾಗಿ ಅಳುತ್ತಾ ನಿಲ್ಲುತ್ತಾರೆ. ಇವರ ದುಃಖ ಮತ್ತು ಅಳು ಕೊಡೆ ಬಂಡೆಗಳ ಮೇಲೆ ಮಲಗಿ ನಿದ್ರಿಸುತ್ತಾ ಇರುವ ಪ್ರಭುದೇವರಿಗೆ ತಟ್ಟಿ ಅವರು ಬೆಚ್ಚಿದಂತೆ ಮೇಲೆದ್ದು ವಿಜಯನಗರದ ಊರ ಅಂಕಣಕ್ಕೆ ಓಡೋಡಿ ಬರುತ್ತಾರೆ.

ಸ್ವಾಮಿ ರಾಚಪ್ಪಾಜಿಯವರು ಕಣ್ಣುಗಳಲ್ಲಿ ಕಿಡಿಕಾರುತ್ತಾ ಗಾರುಡಿಗರ ಬಿರಿದು ಭಿಕ್ಷೆಗಳನ್ನೆಲ್ಲಾ ಕಿತ್ತುಕೊಂಡು ಎರಡು ಬಗೆಲಿಗೂ ನೇತು ಹಾಕಿಕೊಂಡು ಥಕ ಥೈ ಥಕ ಥೈ ಎಂದು ಕುಣಿಯುತ್ತಿದ್ದಾನೆ. ಆಗ ಪ್ರಭುವಿಗೆ ಗಾರುಡಿಗರು ರಾಚಪ್ಪನವರ ಮಹಿಮೆ ತಿಳಿಯದೆ ಅನ್ಯಾಯವಾಗಿ ಪ್ರಾಣ ಕೊಟ್ಟರಲ್ಲ__ಎಂದು ನೊಂದುಕೊಂಡು ರಾಜಪ್ಪನವರನ್ನು ಮೂರು ವಾಗ್ದಾನ ಕೊಡಿರೆಂದು ಕೇಳಿ ಪಡೆದುಕೊಳ್ಳುತ್ತಾರೆ. ಗಾರುಡಿಗರ ಹೆಂಡಿರಲ್ಲಿ ತಮ್ಮ ಮಕ್ಕಳೊಡನೆ ಸೇರಿ.
"ಪರಮಪರಂಜ್ಯೋತಿ ದಯತೋರಿ, ನೀವು ಗಾರುಡಿಗರ ಗಾರುಡಿಗರು, ಮಹಾವಿದ್ಯಾಶೀಲರು, ಸ್ವಾಮಿ ನಾವು ಏನೂ ಅರಿಯದ ಜನರು. ನಿಮ್ಮ ಪಾದಗಳಿಗೆ ಎರಗುತ್ತಿದ್ದೇವೆ. ದಯಮಾಡಿ ನಮ್ಮನ್ನು ಆಶೀರ್ವದಿಸಿ ನಮ್ಮ ಹೆಂಡಿರು ಮಕ್ಕಳನ್ನು ನಮಗೆ ಉಳಿಸಿಕೊಡಿ_ನೀವಲ್ಲದೆ ಅನ್ಯರಾರೂ ನಮ್ಮನ್ನು ಕಾಪಾಡಲಾರರು" ಎಂದೆಲ್ಲಾ ಪ್ರಾರ್ಥಿಸುತ್ತಾರೆ. ಆಗ ದೂಳ್ತ ತೆಗೆದು ಏಳುನೂರು ಗಾರುಡಿಗರ ಮೇಲೂ ಚಿಮುಕಿಸುತ್ತಾರೆ. ನಿದ್ದೆಯಿಂದ ಎದ್ದವರಂತೆ ಎದ್ದ ಗಾರುಡಿಗರು ಮೈಕೈ ಮುರಿದು, ನಂತರ ಸ್ವಾಮಿಗೆ ನಮಸ್ಕರಿಸಿ, "ಪ್ರಭು ನಾವು ಮಹಾ ಮೋಡಿಗಾರರು, ನಮ್ಮ ವಿದ್ಯೆಯಲ್ಲಿ ಮಹಾ ನಿಪುಣರು. ಆದರೆ, ನಿಮ್ಮ ವಿದ್ಯೆಯ ಮುಂದೆ ನಮ್ಮದು ವಿದ್ಯೆಯೇ ಅಲ್ಲ-ನಮ್ಮ ಅಪರಾಧಗಳನ್ನು ಕ್ಷಮಿಸಿ ಕಾಪಾಡಿದಿರಿ" ಎಂದು ಹರ್ಷ ತುಂಬಿದವರಾಗುತ್ತಾರೆ.
ಆಗ ಪ್ರಭುದೇವರು ರಾಚಪ್ಪನವರ ಕಡೆ ನೋಡಿ "ಮಗು ರಾಜಪ್ಪಯ್ಯನವರೆ, ಈ ಗಾರುಡಿಗರ ಬೇರುಮೆ, ನಿಶಾನಿ, ಕೊಂಬಿನ ಕಹಳೆ ನಮಗೆ ಯಾವ ಕೆಲಸಕ್ಕೂ ಬಾರದು, ಮುಂದೆ ನಮ್ಮ ನಿಜಯೋಗದಿಂದ ಬೇಕಾದಷ್ಟು ಬಿರುದು ಬಾವಲಿಗಳು ಬರುತ್ತವೆ. ಆದ್ದರಿಂದ ಅವುಗಳನ್ನೆಲ್ಲಾ ಮಕ್ಕಳಿಗೇ ಹಿಂದಿರುಗಿಸಿ, ಮುಂದೆ ನಡೆಯಿರಿ" ಎಂದರು.
ತಮ್ಮ ಬಿರುದು ಭಿಕ್ಷೆಗಳನ್ನು ಹಿಂದಕ್ಕೆ ಪಡೆದ ಗಾರುಡಿಗರು ಪ್ರಭುದೇವರೆ ಒಕ್ಕಲುತನವನ್ನು ಬೇಡಿ ಪಡೆದುಗೊಳ್ಳುತ್ತಾರೆ, ಮತ್ತು ಪರಂಜ್ಯೋತಿಗಳನ್ನು "ನಿಮ್ಮಲ್ಲಿರುವ ಮಾಯದ ಕಪ್ಪನ್ನು ಕೊಡಿ" ಎಂದು ಪ್ರಾರ್ಥಿಸುತ್ತಾರೆ, ಅದಕ್ಕೆ ಸ್ವಾಮಿ ಒಪ್ಪುವುದಿಲ್ಲ. ನಾವು ಕೊಟ್ಟಿರುವ ಬಿರುದು ಭಿಕ್ಷೆಗಳಲ್ಲೇ ನೀವು ಜೀವನ ಮಾಡಬೇಕು. ನಮ್ಮ ಮಾಯದ ಕಪ್ಪನ್ನು ನಿಮಗೆ ಕೊಟ್ಟರೆ ಹುಲು ಜೀವಿಗಳಾದ ನೀವು ಅದರಿಂದ ಮಹಾತ್ಮರನ್ನೂ ಜಾಪಾಧಿರಾಜರನ್ನು ಸುಮ್ಮನೆ ನೀವು ಕೊಂದುಬಿಡುತ್ತೀರಿ ಆದ್ದರಿಂದ ಅದನ್ನೂ ಕೊಡುವುದಿಲ್ಲ ನಾವು ಮುಂದೆ ಹೊರಡುತ್ತೇವೆ. ನಿಮಗೆ ಸಕಲ ಸನ್ಮಂಗಳವೂ ಉಂಟಾಗಲಿ" ಎಂದು ಸ್ವಾಮಿ ತಮ್ಮ ಶರಣರೊಡಗೂಡಿ ಮುಂದೆ ಹೊರಡುತ್ತಾರೆ.

"ಪರಮ ಪರಂಜ್ಯೋತಿ ನೀವೇ ಬನ್ನಿ,,
ಮಂಟೇದ ಲಿಂಗಯ್ಯ ನೀವೇ ಬನ್ನಿ..

ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
7. ರಾಚಪ್ಪಯ್ಯನವರಿಗೆ ಶುಭ ವಿವಾಹ 

👈 ಹಿಂದಿನ ಸಂಚಿಕೆ:
5. ಪರಂಜ್ಯೋತಿಗಳು ಕಲ್ಯಾಣದಲ್ಲಿ ಶಿಷ್ಯರನ್ನು ಆರಿಸುತ್ತಾರೆ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/4Thv1J
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/wvyYv8
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/nL2m9a
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh

No comments:

Post a Comment